ಮದ್ರಾಸ್ ವಿಶ್ವವಿದ್ಯಾಲಯ -
	ಸ್ಥಾಪನೆ 5 ಸೆಪ್ಟೆಂಬರ್ 1857. ನೂರ ಇಪ್ಪತ್ತೈದು ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದ ಈ ವಿಶ್ವವಿದ್ಯಾಲಯ ಹಲವು ವರ್ಷಗಳ ಕಾಲ ದಕ್ಷಿಣ ಭಾರತದ ಎಲ್ಲ ಕಾಲೇಜುಗಳಿಗೂ ಈಗಿನ ಹಲವು ವಿಶ್ವವಿದ್ಯಾಲಯಗಳಿಗೂ ಮಾತೃಸ್ಥಾನದಲ್ಲಿದ್ದು ಅಧ್ಯಯನದ ಹಲವು ಕ್ಷೇತ್ರಗಳಲ್ಲಿ ಕೇಂದ್ರಸ್ಫೂರ್ತಿಯಾಗಿ ಎಲ್ಲ ಬಗೆಯ ಸೇವೆ ಸಲ್ಲಿಸಿದೆ. 

	1835ರಲ್ಲಿ ಮೆಕಾಲೆ ವರದಿಯ ಪ್ರಕಾರ ಭಾರತೀಯರಿಗೆ ಪಾಶ್ಚಾತ್ಯ ಮಾದರಿಯ ಇಂಗ್ಲೀಷ್ ಶಿಕ್ಷಣ ಕೊಡಲು ಏರ್ಪಾಡಾಗಿತ್ತು. 11-11-1839ರಲ್ಲಿ ಮದ್ರಾಸ್ ಪ್ರಾಂತ್ಯದ ಗೌರ್ನರರಾಗಿದ್ದ ಜೋನ್ ಎಲ್ಫಿನ್‍ಸ್ಟನ್ ಅವರಿಗೆ ಮದ್ರಾಸ್ ಪ್ರಾಂತ್ಯದ 70.000 ಜನರು ರಾಷ್ಟ್ರೀಯ ಮಟ್ಟದ ವಿದ್ಯಾಭ್ಯಾಸ ಕ್ರಮವನ್ನು ಜಾರಿಗೆ ತರಬೇಕೆಂದು ಮನವಿ ಮಾಡಿದರು, ಎಡ್ವೋಕೇಟ್ ಜನರಲ್ ಆಗಿದ್ದ ಜಾರ್ಜ್‍ನೋರ್ಟನ್ ಮದ್ರಾಸ್ ನಗರದಲ್ಲಿ ಇಂಗ್ಲೀಷ್ ಕಾಲೇಜೊಂದನ್ನು ತೆರೆಯಬೇಕೆಂದು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ. ಇದರ ಫಲವಾಗಿ ಸೆಂಟ್ರಲ್ ಕೊಲೀಜಿಯೇಟ್ ಸಂಸ್ಥೆ ಅಥವಾ ಯೂನಿವರ್ಸಿಟಿಯ ಯೋಜನೆಯನ್ನು ಗರ್ವನರ್ ಜಾರಿಗೆ ತಂದ. ಈ `ಯೂನಿವರ್ಸಿಟಿ' ಯಲ್ಲಿ ಎರಡು ಇಲಾಖೆಗಳಿದ್ದುವು; 1. ಇಂಗ್ಲೀಷ್ ಭಾಷಾ ಸಾಹಿತ್ಯ, ಸ್ಥಳೀಯ ಭಾಷೆ ತತ್ವಜ್ಞಾನ, ವಿಜ್ಞಾನ ಶಾಖೆಗಳುಳ್ಳ. `ಹೈಸ್ಕೂಲ್ 2. ಉನ್ನತ ವ್ಯಾಸಂಗವನ್ನು ಬೋಧಿಸುವ ಸಾಹಿತ್ಯ, ತತ್ತ್ವ ಮತ್ತು ವಿಜ್ಞಾನಗಳುಳ್ಳ ಕಾಲೇಜು, 1840ರಲ್ಲಿ ಯೂನಿವರ್ಸಿಟಿಯ ಬೋರ್ಡ್ ರಚನೆಯಾಯ್ತು. ಜಾರ್ಜ್ ನೋರ್ಟನ್ ಇದಕ್ಕೆ ಅಧ್ಯಕ್ಷನಾದ. 1841ರಲ್ಲಿ ಯೂನಿವರ್ಸಿಟಿಯ ಶಾಖೆಯಾಗಿ ಹೈಸ್ಕೂಲಿನ ರಚನೆಯಾಯ್ತು. ಇದೇ ಮುಂದೆ ಪ್ರೆಸಿಡೆನ್ಸಿ ಕಾಲೇಜಾಗಿ ಬೆಳೆಯಿತು.

	5 ಸೆಪ್ಟೆಂಬರ್ 1857ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಸ್ಥಾಪನೆಯಾಯ್ತು. ಆದರೆ ಪ್ರೌಢ ಅಧ್ಯಾಪನಕ್ಕೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರುಗಳಿರಬೇಕೆಂದು ವೂಡ್ 1854ರಲ್ಲಿ ಮಾಡಿದ ಶಿಫಾರಸಿಗೆ ಆಗಿನ ಗವರ್ನರ್ ಜನರಲಾಗಿದ್ದ ಡಾಲ್ ಹೌಸಿಯ ತೀವ್ರ ವಿರೋಧದಿಂದಾಗಿ ಸರ್ಕಾರದ ಅಧಿನಿಯಮದಲ್ಲಿ ಅಂಗೀಕಾರ ದೊರೆಯಲಿಲ್ಲ. ಪ್ರಾಂತ್ಯದ ಗವರ್ನರರು ಛಾನ್ಸಲರು (ಕುಲಪತಿ), ವೈಸ್ ಛಾನ್ಸಲರು (ಉಪಕುಲಪತಿ) ಗವರ್ನರ್ ಜನರಲ್‍ರಿಂದ ನೇಮಕಗೊಂಡವರು. 30 ಜನ ಸದಸ್ಯರಿಗಿಂತ ಕಡಿಮೆಯಿರದ ಸೆನೆಟ್ ಸಭೆ. ಉಪಕುಲಪತಿಗಳು. ಪಬ್ಲಿಕ್ ಇನ್‍ಸ್ಟ್ರಕ್ಷನ್ಸ್‍ನ ಡೈರೆಕ್ಟರು ಪದನಿಮಿತ್ತವಾಗಿ ಮತ್ತು 6 ಮಂದಿ ವಿದ್ಯಾವಿಭಾಗಗಳಿಂದ ಆಯ್ಕೆಯಾದವರುಳ್ಳ ಸಿಂಡಿಕೇಟ್ ಸಭೆ- ಇವಿಷ್ಟು ವಿಶ್ವವಿದ್ಯಾಲಯದ ಅಧಿಕಾರವರ್ಗ. ಸಿಂಡಿಕೇಟ್‍ನಲ್ಲಿ ಸರಿಯಾದ ಪ್ರಾತಿನಿಧ್ಯವಿಲ್ಲವೆಂಬುದರಿಂದ ಆಟ್ರ್ಸ್ (ಕಲಾ) ವಿಭಾಗದಿಂದ ಐವರು, ವಿಜ್ಞಾನ ವಿಭಾಗದಿಂದ ಇಬ್ಬರು ಸದಸ್ಯರಿರಬೇಕೆಂದು ಮುಂದೆ ತೀರ್ಮಾನಿಸಲಾಯ್ತು. 1853ರಿಂದ ಕಾಲೇಜಿನಲ್ಲಿ ಅಧ್ಯಾಪನ ಮಾಡಿಸುವವರನ್ನು ಪ್ರೊಫೆಸರ್ ಎಂದೂ ಹೆಡ್ಮಾಸ್ಟರರನ್ನು ಪ್ರಿನ್ಸಿಪಾಲ್ ಎಂದೂ ಕರೆಯುವ ವಾಡಿಕೆ ಬಂದಿತು. 	

	ಮದ್ರಾಸ್ ವಿಶ್ವವಿದ್ಯಾಲಯದ ಪ್ರಾರಂಭಿಕ ಕಾರ್ಯಚಟುವಟಿಕೆಗಳು ಪರೀಕ್ಷೆ ನಡೆಸುವುದಕ್ಕೆ ಮಾತ್ರ ಸೀಮಿತಗೊಂಡಿದ್ದುವು. 1857ನೆಯ ಸೆಪ್ಟೆಂಬರ್‍ನಲ್ಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಅಂದರೆ ಮೆಟ್ರಿಕ್ಯುಲೇಷನ್ ಪರೀಕ್ಷೆ ಮೊತ್ತಮೊದಲಿಗೆ ನಡೆಯಿತು. ಮುಂದೆ ಎಸ್. ಎಸ್. ಸಿ. ಪರೀಕ್ಷೆಯೂ ಇದಕ್ಕೆ ಸಮಾನಾಂತರವಾದ್ದು ಎಂದು ನಿರ್ಧರಿತವಾಯ್ತು. ಬಿ.ಎ. ಪರೀಕ್ಷೆ 1858ರ ಫೆಬ್ರವರಿ ತಿಂಗಳಲ್ಲಿ ನಡೆಯಿತು. ಹೀಗೆ ಈ ವಿಶ್ವವಿದ್ಯಾಲಯ ಮೊದಲು ಕಲಿಸುವುದಕ್ಕಾಗಿ ಅಲ್ಲದೆ, ಕೇವಲ ಪದವೀದಾನ ಸಂಸ್ಥೆಯಾಗಿ ಕೆಲಸ ಪ್ರಾರಂಭಿಸಿತು.

	ವಿಶ್ವವಿದ್ಯಾಲಯ ಸ್ಥಾಪನೆಯಾದ ಮುಂದಿನ ನಾಲ್ಕು ದಶಕಗಳಲ್ಲಿ ಪ್ರೌಢ ವಿದ್ಯಾಭ್ಯಾಸದ ಬಗ್ಗೆ ಅಭಿರುಚಿ ಹೆಚ್ಚಿ, ವಿದ್ಯಾರ್ಥಿಗಳ ಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತ ಬಂದ ಪರಿಣಾಮವಾಗಿ, ಅದರಲ್ಲಿ ಹಲಕೆಲವು ಮಾರ್ಪಾಡುಗಳ ಅಗತ್ಯ ತಲೆದೋರಿತು. 1877ರಲ್ಲಿ ಯಾವುದಾದರೂ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿ ನಿಗದಿತ ಸಂಸ್ಥೆಯಲ್ಲಿ ನಿಶ್ಚಿತ ಕಾಲಾವಧಿಯತನಕ ಅಧ್ಯಯನ ಮಾಡಿಯೇ ತೀರಬೇಕೆಂಬ ನಿಯಮ ಜಾರಿಗೆ ಬಂದಿತು. 1902ರಲ್ಲಿ ಲಾರ್ಡ್ ಕರ್ಜನ್ ವಿಶ್ವವಿದ್ಯಾಲಯಗಳ ಕೆಲಸಕಾರ್ಯಗಳನ್ನು ಪರಿಶೀಲಿಸಿ, ಅದು ಇನ್ನಷ್ಟು ಉತ್ತಮಗೊಳ್ಳಲು ಸಲಹೆ ಸೂಚನೆಗಳನ್ನು ನೀಡಬೇಕೆಂದು ನಿಯಮಿಸಿದ ಸಮಿತಿ 1904ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅದರ ಪ್ರಕಾರ ಭಾರತ ಸರ್ಕಾರ ವಿಶ್ವವಿದ್ಯಾಲಯಗಳ ಬಗ್ಗೆ ಅಧಿನಿಯಮವನ್ನು ಜಾರಿಗೆ ತಂದಿತು.

	1883ರಲ್ಲಿ ಸೆನೆಟ್ ಸಭೆ ಸಮಿತಿಯೊಂದನ್ನು ಮಾಡಿ, ವಿಶ್ವವಿದ್ಯಾಲಯದ ವಿವಿಧ ಕಾರ್ಯಾಂಗಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ, ಪ್ರತಿಯೊಂದು ಸಭೆಗಳಲ್ಲಿ ಚರ್ಚಿಸಬೇಕಾದ ವಿಷಯ, ಸಮಿತಿಗಳ ನಿರ್ಮಾಣ, ಸೆನೆಟ್‍ನ ನಿಯಮಾವಳಿಗಳು ಮುಂತಾದುವನ್ನು ಸಿದ್ಧಗೊಳಿಸಿತಲ್ಲದೆ ಅವುಗಳನ್ನು ಅಂಗೀಕರಿಸಿ ಜಾರಿಗೆ ತಂದಿತು. 1923ರ ಅಧಿನಿಯಮ ವಿಶ್ವವಿದ್ಯಾಲಯಕ್ಕೆ ಬಹುಪಾಲಿನ ಸ್ವಯಂ ಅಧಿಕಾರಗಳನ್ನಿತ್ತಿತು. ಮುಖ್ಯವಾಗಿ ಆಡಳಿತ, ಅಧ್ಯಯನ, ಅಧ್ಯಾಪನ ವಿಷಯಗಳು ಹಣಕಾಸಿನ ವಿನಿಯೋಗ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಸ್ವಯಂ ಅಧಿಕಾರವನ್ನು ಪಡೆಯಿತು. ಉಪಕುಲಪತಿ ವಿಶ್ವವಿದ್ಯಾಲಯದ ಪ್ರಧಾನ ಆಡಳಿತಾಧಿಕಾರಿ. ಮೂರುವರ್ಷಗಳ ಕಾಲದಲ್ಲಿ ಪೂರ್ಣವಧಿಯ ಅಧಿಕಾರಿ. ಸೆನೆಟ್ ಮೂವರ ಹೆಸರನ್ನು ಸೂಚಿಸುವುದು; ಅವರಲ್ಲಿ ಒಬ್ಬರನ್ನು ಕುಲಪತಿಗಳು (ಗರ್ವನರ್) ಉಪಕುಲಪತಿಗಳನ್ನಾಗಿ ನಿಯಮಿಸುವರು. ಉಪಕುಲಪತಿಯವರದು ಪೂರ್ಣವಧಿಯ ನಿಯಮನ, ಸಾಧಾರಣ ಮಟ್ಟಿಗೆ ಅವರ ಅಧಿಕಾರದ ಅವಧಿ ಮೂರು ವರ್ಷಗಳ ಕಾಲ. ವಿಶ್ವವಿದ್ಯಾಲಯದ ಆಡಳಿತದ ಸರ್ವೋಚ್ಚ ಅಧಿಕಾರ ಮತ್ತು ಜವಾಬ್ದಾರಿಯುಳ್ಳವರು ಉಪಕುಲಪತಿಗಳು. ವಿಶ್ವವಿದ್ಯಾಲಯದ ಅಧಿನಿಯಮಗಳಿಗನುಸರಿಸಿ ಕಾರ್ಯ ನಿರ್ವಹಿಸಬೇಕಾದುದು ಉಪಕುಲಪತಿಗಳ ಕರ್ತವ್ಯ. ಈ ನಿಯಮ ಇಂದಿಗೂ ಜಾರಿಯಲ್ಲಿದೆ. ಆದರೆ ಈಗ ಉಪಕುಲಪತಿಗಳ ಆಯ್ಕೆಗೆ ಮೂವರ ಹೆಸರುಗಳನ್ನು ಸೆನೆಟ್ ಆಯ್ಕೆ ಮಾಡುವುದಿಲ್ಲ. ಅದಕ್ಕೆ ಬೇರೆ ಒಂದು ಸಮಿತಿಯ ರಚನೆಯಾಗಿ, ಸಮಿತಿಯ ಸದಸ್ಯರು ಮೂವರ ಹೆಸರುಗಳನ್ನು ಸೂಚಿಸುತ್ತಾರೆ. ಅವರಲ್ಲಿ ಒಬ್ಬರನ್ನು ಕುಲಪತಿಗಳು ಆಯ್ಕೆ ಮಾಡುತ್ತಾರೆ. ಉಳಿದೆಲ್ಲ ನಿಯಮಾವಳಿಗಳು ಹಿಂದಿನಂತೆಯೇ ಇವೆ.

	ಸೆನೆಟ್ ಪರಮೋಚ್ಚ ಕಾರ್ಯಾಂಗ, ವಾರ್ಷಿಕ ವರದಿಯನ್ನು ಪರಿಶೀಲಿಸುವುದು ಹಾಗೂ ನಿಯಮಾವಳಿಗಳನ್ನು ರೂಪಿಸುವುದು ಇದರ ಕಾರ್ಯ.

	ಸಿಂಡಿಕೇಟ್ ವಿಶ್ವವಿದ್ಯಾಲಯದ ಕಾನೂನುಗಳನ್ನು ರಚಿಸುವುದು. ತಿದ್ದುಪಡಿಗಳನ್ನು ತರುವುದು ಹಿಂದೆಗೆದುಕೊಳ್ಳುವುದು ಮುಂತಾದ ಕಾರ್ಯಗಳನ್ನು ಮಾಡುತ್ತದೆ. ವಿಶ್ವವಿದ್ಯಾಲಯದ ಆಡಳಿತದ ಸರ್ವೇಕ್ಷಣ ಮಾಡುತ್ತದೆ. ಸಿಂಡಿಕೇಟಿನ ಸದಸ್ಯರಾಗಲು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವವರಿಗೆ ಹಕ್ಕಿಲ್ಲ. ಇತರ ಕಾಲೇಜುಗಳ ಅಧ್ಯಾಪಕರು ಮಾತ್ರ ಸಿಂಡಿಕೇಟಿಗೆ ಚುನಾಯಿತರಾಗಬಹುದು. ಮೂರು ವರ್ಷಗಳಿಗೊಮ್ಮೆ ಈ ಎಲ್ಲ ಸಭೆಗಳಿಗೆ ಚುನಾವಣೆಗಳು ನಡೆಯುತ್ತವೆ. ಅಕಾಡೆಮಿಕ್ ಕೌನ್ಸಿಲ್ ಮತ್ತು ಸೆನೆಟ್ ಸಭೆಗಳಿಗೆ ವಿಶ್ವವಿದ್ಯಾಲಯದ ವಿಭಾಗದ ಮುಖ್ಯಸ್ಥರೂ ಪ್ರೊಫೆಸರ್ ಆಗಿರುವವರೂ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಪದನಿಮಿತ್ತವಾಗಲ್ಲದೆ ಚುನಾಯಿತರಾದ ಸದಸ್ಯರು ಕೇವಲ ಎರಡು ಬಾರಿ ಮಾತ್ರ ಚುನಾಯಿತರಾಗಿ ಸದಸ್ಯರಾಗಿರಲು ಸಾಧ್ಯ. ಈ ನಿಯಮ ಈಗ ಜಾರಿಯಲ್ಲಿದೆ. ಹಿಂದೆ ಸಿಂಡಿಕೇಟ್ ಮತ್ತು ಸೆನೆಟ್‍ಗೆ ಮತ್ತೆ ಮತ್ತೆ ಚುನಾಯಿತರಾಗಿ, ಕೆಲವರು 20 ವರ್ಷ, 30 ವರ್ಷಗಳ ತನಕ ಸದಸ್ಯರಾಗಿರುತ್ತಿದ್ದ ಸಂದರ್ಭಗಳಿದ್ದುವು.

	ಅಕಾಡೆಮಿಕ್ ಕೌನ್ಸಿಲ್: ಅಧ್ಯಯನ, ಅಧ್ಯಾಪನ ವಿಷಯದಲ್ಲಿ ಸರ್ವೋಚ್ಚ ಸಭೆ, ಪರೀಕ್ಷೆ, ಪಠ್ಯ ವಿಷಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಇದರ ಕಾರ್ಯಕ್ಷೇತ್ರ. ಹಲವು ಅಧ್ಯಯನ ಶಾಖೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಂಡಳಿಗಳಿವೆ. ಅವುಗಳು ಮಾಡಿದ ಶಿಫಾರಸುಗಳನ್ನು ಈ ಸಭೆ ವಿಮರ್ಶಿಸಿ, ಸೆನೆಟಿನ ಮುಂದಿಡುತ್ತದೆ. ಸೆನೆಟಿನ ಅಂಗೀಕಾರವಾದ ಮೇಲೆ ಅದು ಜಾರಿಗೆ ಬರುತ್ತದೆ. ಸಿಂಡಿಕೇಟ್ ಅದನ್ನು ಕಾರ್ಯಗತಗೊಳಿಸುತ್ತದೆ. 1884ರಲ್ಲಿ ಮೊತ್ತ ಮೊದಲಿಗೆ ಅಧ್ಯಯನ ಮಂಡಳಿಗಳು ರೂಪುಗೊಂಡವು.

	ಕಾಲೇಜುಗಳಿಗೆ ಅಂಗೀಕಾರ; 1890ರಲ್ಲಿ ಅಂಗೀಕಾರದ ನಿಯಮಾವಳಿಗಳನ್ನು ಪರಿವರ್ತನೆ ಮಾಡಲಾಯಿತು. ಈ ಹೊಸ ಕಾನೂನಿನಂತೆ ಸಿಂಡಿಕೇಟ್ ಯಾವುದೇ ಕಾಲೇಜುಗಳಿಗೆ ಅಂಗೀಕಾರವನ್ನು ತಿರಸ್ಕರಿಸುವ ಹಕ್ಕನ್ನು ಪಡೆಯಿತು. ತಕ್ಕಷ್ಟು ಸೌಲಭ್ಯ, ಉತ್ತಮ ಅಧ್ಯಾಪಕವರ್ಗ ಮತ್ತು ಹಣಕಾಸಿನ ಕೊರತೆಯಿಲ್ಲದಿರುವಿಕೆಯೇ ಅಂಗೀಕಾರಕ್ಕೆ ಬೇಕಾದ ಅರ್ಹತೆಗಳು. ಇವಿಲ್ಲದಿದ್ದರೆ ಕಾಲೇಜುಗಳಿಗೆ ಅಂಗೀಕಾರ ದೊರೆಯದು.

	ವಿಶ್ವವಿದ್ಯಾಲಯವೆಂದರೆ ವಿದ್ಯಾಸಂಸ್ಥೆಗಳಿಗೆ ಅಂಗೀಕಾರ ಕೊಡುವ ಹಾಗೂ ಪರೀಕ್ಷೆಗಳನ್ನು ನಡೆಸುವ ಸೀಮಿತ ಜವಾಬ್ದಾರಿಯಿದ್ದರೆ ಸಾಲದು; ಈ ಜವಾಬ್ದಾರಿಯೊಡನೆ ವಿಶ್ವವಿದ್ಯಾಲಯದಲ್ಲಿಯೂ ಕಲಿಸುವ ಹಾಗೂ ಸಂಶೋಧನೆ ನಡೆಸುವ ಕಾರ್ಯಗಳಿಗೂ ಅವಕಾಶ ಕಲ್ಪಿಸಬೇಕೆಂಬ ಅಧಿನಿಯಮ 1904ರಲ್ಲಿ ಜಾರಿಯಾಯಿತು. 

	1913ರಲ್ಲಿ ಭಾರತ ಸರ್ಕಾರ ವಿದ್ಯಾರ್ಥಿಗಳೂ ಅಧ್ಯಾಪಕರೂ ಒಂದೆಡೆಯಲ್ಲಿ ನೆಲೆಸಿರುವಂಥ (ರೆಸಿಡೆನ್ಸಿಯಲ್) ವಿಶ್ವವಿದ್ಯಾಲಯಗಳ ನಿರ್ಮಾಣದ ಗೊತ್ತುವಳಿಯನ್ನು ತಂದಿತು. ಇದರ ಫಲವಾಗಿ ಮೈಸೂರು ವಿಶ್ವವಿದ್ಯಾಲಯ 1917ರಲ್ಲಿ, ಉಸ್ಮಾನಿಯಾ ವಿಶ್ವವಿದ್ಯಾಲಯ ಹೈದಾರಾಬಾದಿನಲ್ಲಿ 1918ರಲ್ಲಿ ಆರಂಭಗೊಂಡವು. 1923ರ ಅಧಿನಿಯಮದಂತೆ ವಿದ್ಯಾಭ್ಯಾಸವನ್ನು ಅಂಕೆಯೊಳಗಿಟ್ಟುಕೊಂಡ ಅಧಿಕಾರ ವರ್ಗದಲ್ಲಿ ವ್ಯತ್ಯಾಸಗಳಾದವು. ಬೋಧನಾ ಮತ್ತು ಸಂಶೋಧನಾ ರಂಗ ವಿಶ್ವವಿದ್ಯಾಲಯದಲ್ಲಿ ವಿಸ್ತಾರಗೊಂಡಿತು. ಕಾಲೇಜುಗಳಿಗೆ ಅಂಗೀಕಾರವೀಯುವ ಷರತ್ತುಗಳ ಕುಂದುಕೊರತೆಗಳನ್ನು ನಿವಾರಿಸುವ ಬಗ್ಗೆ ಹೆಚ್ಚು ಗಮನ ಕೊಡಲಾಯಿತು.

	1932-67ರ ಅವಧಿಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕಾರ್ಯಕ್ಷೇತ್ರದೊಳಗೆ ಎರಡು ಹೊಸ ವಿಶ್ವವಿದ್ಯಾಲಯಗಳು ನಿರ್ಮಾಣವಾದುವು. 1937ರಲ್ಲಿ ತಿರುವಾಂಕೂರಿನ ವಿಶ್ವವಿದ್ಯಾಲಯ (ಈಗ ಕೇರಳ ವಿಶ್ವವಿದ್ಯಾಲಯ) 1954ರಲ್ಲಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ರೂಪುಗೊಂಡುವು. 1958ರಲ್ಲಿ ಭಾಷಿಕ ರಾಜ್ಯಗಳ ಪುನರ್ವಿಂಗಡಣೆ ನಡೆದ ಬಳಿಕ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕಾಲೇಜುಗಳು ಮದ್ರಾಸ್ ವಿಶ್ವವಿದ್ಯಾಲಯದಿಂದ ಹೊರಗುಳಿದವು.

	1957ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಶತಮಾನೋತ್ಸವವನ್ನು ಆಚರಿಸಿತು. ಆ ಕಾಲದಲ್ಲಿ 76 ವಿದ್ಯಾಸಂಸ್ಥೆಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟಿದ್ದುವು. ಇವುಗಳಲ್ಲಿ 15 ಕಾಲೇಜುಗಳು ಮದ್ರಾಸಿನ ನಗರ ಪ್ರದೇಶದ ವ್ಯಾಪ್ತಿಯಲ್ಲಿ, 40 ವಿಶ್ವವಿದ್ಯಾಲಯಕ್ಕೆ ಅನುಬಂಧಗೊಂಡವು, 21 ಪ್ರಾಚ್ಯ ಅಧ್ಯಯನ ಸಂಸ್ಥೆಗಳು ಇದರ ಅಧೀನವಿದ್ದುವು. 1957ರ ಜನವರಿ 28ರಿಂದ ಫೆಬ್ರವರಿ 1ನೆಯ ದಿನಾಂಕಗಳಲ್ಲಿ ನಡೆದ ಶತಮಾನೋತ್ಸವದ ಅಂಗವಾಗಿ ಇದರ ಆಡಳಿತ ವಿಭಾಗಗಳಿಗೆ ಒಂದು ಹೊಸ ಕಟ್ಟಡ ಮತ್ತು ಶತಮಾನೋತ್ಸವದ ನೆನಪಿಗೆ ಒಂದು ಆಡಿಟೋರಿಯಮ್ ಭವ್ಯವಾಗಿ ನಿರ್ಮಾಣಗೊಂಡವು. 1961ನೆಯ ಫೆಬ್ರವರಿ 21ರಂದು ಇಂಗ್ಲೆಂಡಿನ ರಾಣಿ ಎಲಿಜಬೆತ್ ತನ್ನ ಪತಿಯೊಡನೆ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟರು. 1966ರಲ್ಲಿ ಮದುರೆಯಲ್ಲಿ ಮದುರೈ ವಿಶ್ವವಿದ್ಯಾಲಯ (ಈಗ ಮದುರೈ ಕಾಮರಾಜ ವಿಶ್ವವಿದ್ಯಾಲಯ), 1978ರಲ್ಲಿ ಮದರಾಸಿನ ಗಿಂಡಿ ಎಂಬಲ್ಲಿ ಪೇರರಿಞರ್ ಅಣ್ಣಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಈಗ ಅಣ್ಣಾ ಯೂನಿವರ್ಸಿಟಿ ಆಫ್ ಎಂಜನಿಯರಿಂಗ್) ಹಾಗೂ 1982ರಲ್ಲಿ ಕೊಯಮತ್ತೂರಿನಲ್ಲಿ ಭಾರತಿಯಾರ್, ತಿರುಚಿನಾಪಳ್ಳಿಯಲ್ಲಿ ಭಾರತಿದಾಸನ್ ಯೂನಿವರ್ಸಿಟಿಗಳು ಸ್ಥಾಪನೆಗೊಂಡವು. ಹೀಗೆ ಮೊದಲು ಮದ್ರಾಸ್ ವಿಶ್ವವಿದ್ಯಾಲಯದೊಳಗಿದ್ದ ಆಯಾ ಪ್ರಾದೇಶಿಕ ಕಾಲೇಜುಗಳೆಲ್ಲ ಈಗ ಆಯಾ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯೊಳಗೆ ಸೇರಿಹೋಗಿವೆ. ಪ್ರಾದೇಶಿಕವಾಗಿ ಇಂದು ಇದರ ವ್ಯಾಪ್ತಿ ಕುಗ್ಗಿ ಹೋದರೂ ವಿದ್ಯಾಕ್ಷೇತ್ರದಲ್ಲಿ ಇದರ ಸಾಧನೆ, ಸಿದ್ಧಿಗಳು ಸ್ಫೂರ್ತಿದಾಯಕವಾಗಿ ಸಾಗುತ್ತಲೇ ಇವೆ.

	ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗಳಿಸಿದ ಪ್ರಶಸ್ತಿ, ಪದವಿ ಕೀರ್ತಿಗಳೇ ಅದರ ಪ್ರಗತಿಯ ಪ್ರಧಾನ ಕುರುಹುಗಳಾಗಿವೆ. ಈ ನಿಟ್ಟಿನಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಅತ್ಯಂತ ಹಿರಿಯ ಸ್ಥಾನದಲ್ಲಿ ನಿಲ್ಲುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ಷೇತ್ರದಲ್ಲಿ ದುಡಿದವರು, ಅನೇಕಾನೇಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ವಿಜ್ಞಾನಿಗಳು, ತತ್ತ್ವಜ್ಞಾನಿಗಳು, ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರು, ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ಹೀಗೆ ರಾಷ್ಟ್ರಮಟ್ಟದ, ರಾಜ್ಯಮಟ್ಟದ, ಅಚಿತಾರಾಷ್ಟ್ರೀಯಮಟ್ಟದ ಅನೇಕಾನೇಕ ಪ್ರತಿಷ್ಠಿತ ವ್ಯಕ್ತಿಗಳು ಮದರಾಸು ವಿಶ್ವವಿದ್ಯಾಲಯದಲ್ಲಿ ರೂಪುತಳೆದವರು. ಪ್ರಪಂಚ ವಿಖ್ಯಾತರಾದ, ನೊಬೆಲ್ ಬಹುಮಾನ ವಿಜೇತ ಸರ್.ಸಿ.ವಿ.ರಾಮನ್ ಅವರು ಮದ್ರಾಸ್ ವಿಶ್ವವಿದ್ಯಾಲಯದ ಕೊಡುಗೆ ಎಂಬುದು ಗಮನಾರ್ಹ.

	ಮದ್ರಾಸ್ ವಿಶ್ವವಿದ್ಯಾಲಯ 1982ರಲ್ಲಿ ಶತಮಾನೋತ್ತರ ರಜತೋತ್ಸವವನ್ನು ವೈಭವದಿಂದ ಆಚರಿಸಿತು.

	1857ರಿಂದ ಈ ತನಕ 33 ಉಪಕುಲಪತಿಗಳು ಈ ವಿಶ್ವವಿದ್ಯಾಲಯದ ಚುಕ್ಕಾಣಿ ಹಿಡಿದಿದ್ದಾರೆ. ಇವರಲ್ಲಿ 20 ಮಂದಿ ಬ್ರಿಟಿಷರು. 1904ರಲ್ಲಿ ಸರ್.ಎಸ್.ಸುಬ್ರಮಣ್ಯ ಅಯ್ಯರ್ ಎಂಬವರು ಮೊತ್ತಮೊದಲಿಗೆ ಕೆಲವು ತಿಂಗಳು ಉಪಕುಲಪತಿಯ ಸ್ಥಾನವನ್ನಲಂಕರಿಸಿದ ಭಾರತೀಯರು. 1916-18ರಲ್ಲಿ ಸರ್.ಪಿ.ಎಸ್.ಶಿವಸ್ವಾಮಿ ಅಯ್ಯರ್ ಎರಡನೆಯ ಭಾರತೀಯ ಉಪಕುಲಪತಿ. ಇಲ್ಲಿಂದ ಮಧ್ಯೆ ಮಧ್ಯೆ ಭಾರತೀಯ, ಬ್ರಿಟಿಷ್ ಉಪಕುಲಪತಿಗಳು ಕಾರ್ಯನಿರ್ವಹಿಸುತ್ತಿದ್ದು, 1937 ರಿಂದ ಎಲ್ಲರೂ ಭಾರತೀಯರೇ ಆಗಿದ್ದಾರೆ. ಇವರಲ್ಲಿ ಸರ್.ಎ.ಲಕ್ಷ್ಮಣಸ್ವಾಮಿ ಮುದಲಿಯಾರರು 1942 ರಿಂದ 1969ರ ತನಕ ಸತತವಾಗಿ 27 ವರ್ಷಗಳ ಕಾಲ ಈ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು ಎಂಬುದು ಬಹುಶಃ ಪ್ರಪಂಚದ ಇತರ ವಿಶ್ವವಿದ್ಯಾಲಯಗಳ 12 ಮಂದಿ ಬ್ರಿಟಿಷರು ಇದರ ಕುಲಸಚಿವರಾಗಿ ಕೆಲಸಮಾಡಿದರು. 1949ರಿಂದ ಇಂದಿನ ತನಕ 7 ಜನ ಭಾರತೀಯ ಕುಲಸಚಿವರಾಗಿದ್ದಾರೆ. ವಿಶ್ವವಿದ್ಯಾಲಯದ ಅಧ್ಯಯನ, ಅಧ್ಯಾಪನದ ಅಂಗವಾಗಿ ಈಗ 62 ವಿಭಾಗಗಳು ಕಾರ್ಯಮಗ್ನವಾಗಿವೆ. ಈಗಿನ ಉಪಕುಲಪತಿ ಕದಿರೇಸನ್ (1985).

	ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗ 1925ರ ಸೆನೆಟ್ ಸಭೆಯ ತೀರ್ಮಾನದಂತೆ 1927 ರಿಂದ ಕೆಲಸ ಮಾಡಲಾರಂಭಿಸಿತು. ಪ್ರಾರಂಭದಲ್ಲಿ ಇಲ್ಲಿದ್ದುದು ಇಬ್ಬರೇ ಅಧ್ಯಾಪಕರು, ಕನ್ನಡದ ಮೊತ್ತಮೊದಲಿನ ಎಂ.ಎ. ಪದವಿ ಪಡೆದ ಆರ್.ನರಸಿಂಹಾಚಾರ್ಯರು ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸೇರಿದವರು. ಕನ್ನಡ ಪದವಿ ತರಗತಿಗಳು ಮತ್ತು ಎಂ.ಎ. ತರಗತಿಗಳೆಲ್ಲ ಈ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಿದ್ದ ಕಾಲೇಜುಗಳಲ್ಲಿ ನಡೆಯುತ್ತಿದ್ದುವು. ಇದರ ವಿಭಾಗದ ಅಧ್ಯಾಪಕರು ಅಂತರ್ ಕಾಲೇಜಿನ ಬೋಧನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರಿಗೆ ವಿಭಾಗ ಸಂಶೋಧನೆ, ಗ್ರಂಥ ಪ್ರಕಟಣೆಯಂಥ ಕಾರ್ಯವಹಿಸಿತ್ತು. ಅನೇಕ ಪ್ರಾಚೀನ ಕನ್ನಡ ಗ್ರಂಥಗಳನ್ನು ಸಂಪಾದಿಸಿ ಪ್ರೌಢ ಪ್ರಸ್ತಾವನೆಗಳೊಂದಿಗೆ ಇದು ಪ್ರಕಟಿಸಿದೆ. ಕವಿರಾಜಮಾರ್ಗ, ಶಬ್ದಮಣಿದರ್ಪಣ, ರಸರತ್ನಾಕರ ಮತ್ತು ಅನೇಕ ಜೈನಪುರಾಣಗಳು ಮುಂತಾಗಿ ಈ ತನಕ ಸುಮಾರು 25ಕ್ಕಿಂತಲೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ. ಇದರಲ್ಲಿ ಕಿಟ್ಟೆಲ್ ಕೋಶವನ್ನು ಪರಿಷ್ಕರಿಸಿ 4 ಸಂಪುಟಗಳಲ್ಲಿ ಪ್ರಕಟಿಸಿದುದು ಗಮನಾರ್ಹವಾದುದು. 1976 ರಿಂದ ವಿಶ್ವವಿದ್ಯಾಲಯದ ವಿಭಾಗದಲ್ಲಿ ಕನ್ನಡ ಎಂ.ಎ. ತರಗತಿಗಳನ್ನು ತೆರೆಯಲಾಗಿದೆ. ಎಂ.ಫಿಲ್ ಮತ್ತು ಪಿ.ಎಚ್.ಡಿ.ಗೆ ಸಂಶೋಧನೆ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಒಬ್ಬರು ಪ್ರೊಫೆಸರ್, ಒಬ್ಬರು ರೀಡರ್ ಮತ್ತು ಇಬ್ಬರು ಲೆಕ್ಚರರ್‍ಗಳು ವಿಭಾಗದ ಸಿಬ್ಬಂದಿವರ್ಗವಾಗಿದೆ. 1927ರಿಂದ ಈ ತನಕ ಒಟ್ಟು ಐದು ಜನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸಮಾಡಿದ್ದಾರೆ. ಎ. ವೆಂಕಟರಾವ್ (ಸೀನಿಯರ್ ಲೆಕ್ಚರರ್ 1927-35); ಎಚ್. ಚೆನ್ನಕೇಶವ ಅಯ್ಯಂಗಾರ್ (1936-39); ಎಂ. ಮರಿಯಪ್ಪಭಟ್ (ಮೊದಲು ರೀಡರ್ ಆಮೇಲೆ ಪ್ರೊಫೆಸರ್ 1940-73); ಎ. ಶಂಕರ ಕೆದಿಲಾಯ (ರೀಡರ್ ಮತ್ತು ಮುಖ್ಯಸ್ಥರು 1973-76). ಕೆ. ಕುಶಾಲಪ್ಪಗೌಡ. (ಪ್ರೊಫೆಸರ್ 1976ರಿಂದ). ಆರು ಜನ ಉಪನ್ಯಾಸಕ ಹಾಗೂ ರೀಡರ್ ಹುದ್ದೆಯಲ್ಲಿ ಕೆಲಸಮಾಡಿದ್ದಾರೆ. 1976ರಿಂದ ಇಲ್ಲಿ ಅಧ್ಯಯನಮಾಡಿದ 25 ಮಂದಿ ವಿದ್ಯಾರ್ಥಿಗಳು ಎಂ.ಎ. ಮತ್ತು 12 ಮಂದಿ ಎಂ.ಫಿಲ್ ಪದವಿಗಳನ್ನು ಗಳಿಸಿದ್ದಾರೆ. ಈ ತನಕ (1986) ಒಟ್ಟು 6 ಮಂದಿ ಸಂಶೋಧಕರು ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.
(ಕೆ.ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ